ಎಲಿಜûಬೆತ್ 2  (1926-    ). ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡಿನ ರಾಣಿ. ಆರನೆಯ ಜಾರ್ಜ್ ದೊರೆಯ (ಆಗ ಯಾರ್ಕ್ ಡ್ಯೂಕ್) ಹಿರಿಯ ಪುತ್ರಿ. ಜನನ 1926ರ ಏಪ್ರಿಲ್ 21ರಂದು, ಲಂಡನ್ ನಗರದಲ್ಲಿ. ಈಕೆಯ ಪೂರ್ತಿ ಹೆಸರು ಎಲಿಜûಬೆತ್ ಅಲೆಗ್ಸಾಂಡ್ರಾ ಮೇರಿ. ತಾಯಿಯ ನೇತೃತ್ವದಲ್ಲಿ ಈಕೆಯ ವಿದ್ಯಾಭ್ಯಾಸ ನಡೆಯಿತು. ಇತಿಹಾಸ, ಸಂಗೀತಗಳೇ ಅಲ್ಲದೆ ಅನೇಕ ಭಾಷೆಗಳಲ್ಲಿ ಈಕೆಗೆ ಪರಿಶ್ರಮವುಂಟು.
	
ಎಲಿಜûಬೆತಳ ಬಾಲ್ಯದಲ್ಲಿ ಸಂಭವಿಸಿದ ಎರಡು ಮಹತ್ತ್ವದ ಘಟನೆಗಳು ಈಕೆಯ ಬಾಳನ್ನೆ ಅಲ್ಲದೆ ಇಡೀ ರಾಷ್ಟ್ರದ ಹಾಗೂ ವಿಶ್ವದ ಸ್ವರೂಪವನ್ನೆ ಬಹಳ ಮಟ್ಟಿಗೆ ಬದಲಾಯಿಸಿದುವೆನ್ನಬಹುದು. ಈಕೆಯ ದೊಡ್ಡಪ್ಪ ಎಂಟನೆಯ ಎಡ್ವರ್ಡನ ಸಿಂಹಾಸನ ತ್ಯಾಗ (1936) ಮೊದಲನೆಯ ಮುಖ್ಯ ಘಟನೆ. ಇದರಿಂದ ಒಮ್ಮೆಲೇ ಈಕೆಯ ಪ್ರಾಮುಖ್ಯ ಬಹಳ ಹೆಚ್ಚಿತು. ತಂದೆ ಜಾರ್ಜನ ಸಿಂಹಾಸನಾರೋಹಣವಾದಾಗ ಮಗಳು ಎಲಿಜûಬೆತ್ ಅದಕ್ಕೆ ಉತ್ತರಾಧಿಕಾರಿಣಿಯಾದಳು. 
	
ಎರಡನೆಯ ಮಹತ್ವದ ಘಟನೆಯೆಂದರೆ 1939ರಲ್ಲಿ ಆರಂಭವಾದ ಎರಡನೆಯ ಮಹಾಯುದ್ಧ. ಇದರ ಪರಿಣಾಮವಾಗಿ ಬ್ರಿಟಿಷ್ ರಾಜತ್ವದ ಸ್ವರೂಪದಲ್ಲೆ ಮಹತ್ತರ ಬದಲಾವಣೆಗಳಾದುವು. ಆಗ ಈಕೆ ತಂದೆ ತಾಯಿಯರಿಂದ ದೂರ ಇರಬೇಕಾಗಿ ಬಂತು. ಹಿರಿಯರ ಮತ್ತು ಸರ್ಕಾರದ ವಿರೋಧ ಲೆಕ್ಕಿಸದೆ ಸೇನೆಯಲ್ಲಿ ಈಕೆ ವಾಹನ ಚಾಲಕಿಯ ತರಬೇತಿ ಪಡೆದಳು.
	
1947ರ ಆದಿಭಾಗದಲ್ಲಿ ಎಲಿಜûಬೆತ್ ತಂದೆ ತಾಯಿಯರೊಂದಿಗೆ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಳು. ಇದೇ ವೇಳೆ ಈಕೆಗೆ 21 ವರ್ಷ ತುಂಬಿತು. ಆ ಸಂದರ್ಭದಲ್ಲಿ ಕಾಮನ್‍ವೆಲ್ತ್ ಒಕ್ಕೂಟವನ್ನುದ್ದೇಶಿಸಿ ಎಲಿಜûಬೆತ್ ಮಾಡಿದ ಪ್ರಸಾರ ಭಾಷಣದಲ್ಲಿ ತನ್ನ ಮನೆತನದ ಹಿರಿಯ ಆದರ್ಶವನ್ನೆ ಅನುಸರಿಸುವ ಆಶಯ ವ್ಯಕ್ತಪಡಿಸಿದಳು. ಅದೇ ವರ್ಷದ ನವೆಂಬರಿನಲ್ಲಿ ಈಕೆಗೆ ಗ್ರೀಸ್ ರಾಜಕುಮಾರ ಫಿಲಿಪ್ ಮೌಂಟ್‍ಬ್ಯಾಟನನೊಂದಿಗೆ ವೆಸ್ಟ್ ಮಿನ್ಸ್‍ಟರ್ ಅಬೆಯಲ್ಲಿ ವಿವಾಹ ನೆರವೇರಿತು. ಆಗ್ಗೆ ಒಂಬತ್ತು ತಿಂಗಳ ಹಿಂದೆ ತಾನೇ ಗ್ರೀಕ್ ಸಿಂಹಾಸನಕ್ಕೆ ತನಗಿದ್ದ ಹಕ್ಕನ್ನು ತ್ಯಜಿಸಿ ಬ್ರಿಟಿಷ್ ಪ್ರಜೆಯಾಗಿದ್ದ ರಾಜಕುಮಾರ ಫಿಲಿಪನಿಗೆ ಆ ಸಂದರ್ಭದಲ್ಲಿ ಎಡಿನ್‍ಬರೊ ಡ್ಯೂಕ್ ಪದವಿ ನೀಡಲಾಯಿತು. (ನೋಡಿ- ಎಡಿನ್‍ಬರೊ-ಡ್ಯೂಕ್-(ಫಿಲಿಪ್-ಮೌಂಟ್‍ಬ್ಯಾಟನ್)). ಈ ದಂಪತಿಗಳಿಗೆ ನಾಲ್ವರು ಮಕ್ಕಳಿದ್ದಾರೆ-ಚಾರಲ್ಸ್ (1948), ಆನ್ (1950), ಆಂಡ್ರ್ಯೂ (1960), ಎಡ್ವರ್ಡ್ (1966). ಚಾರಲ್ಸ್‍ನನ್ನು ಯುವರಾಜನನ್ನಾಗಿ ಘೋಷಿಸಲಾಗಿದೆ.
	
1951ರ ಬೇಸಗೆಯಲ್ಲಿ 6ನೆಯ ಜಾರ್ಜನ ಆರೋಗ್ಯ ಕಳವಳಕರವಾಯಿತು. ಎಲಿಜûಬೆತ್ ಕೀನ್ಯದಲ್ಲಿ ಪ್ರವಾಸದಲ್ಲಿದ್ದಾಗ ತಂದೆಯ ಮರಣದ ಸುದ್ಧಿ ಬಂತು. ತತ್‍ಕ್ಷಣವೇ ಇಂಗ್ಲೆಂಡಿಗೆ ಮರಳಿದಳು. 1952ರ ಫೆಬ್ರುವರಿ 8ರಂದು ರಾಣಿಯಾದಳು. ಈಕೆಯ ಪಟ್ಟಾಭಿಷೇಕವಾದದ್ದು 1952ರ ನವೆಂಬರ್ 4ರಂದು-ವೆಸ್ಟ್‍ಮಿನ್ಸ್‍ಟರ್ ಅಬೆಯಲ್ಲಿ.
ಪತ್ರಿಕೆಗಳಲ್ಲೂ ಸಂಪ್ರದಾಯ ಪ್ರಿಯರಿಂದಲೂ ಬರುವ ಕಟು ವಿಮರ್ಶೆಗಳಿಂದ ವಿಚಲಿತಳಾಗುವುದಿಲ್ಲ. ಎಲಿಜûಬೆತ್ ಸ್ನೇಹಮಯಿ, ಒಳ್ಳೆಯ ತಾಯಿ ಮತ್ತು ಪತ್ನಿ. ಬ್ರಿಟಿಷರ ಅಭಿಮಾನ ಗಳಿಸಿದ್ದಾಳೆ. ಸರ್ಕಾರದ ಕಾರ್ಯಗಳಲ್ಲಿ ಈಕೆಗೆ ಹೆಚ್ಚಿನ ಶ್ರದ್ಧೆ ಇದೆ.

(ಬಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ